ಸಂಸ್ಥಾಪಕರು: ದಿವಂಗತ ಆರ್‌.ವಿ.ಪಂಡಿತರು

ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ., ಕುಮಟಾ.

ಸಹಕಾರ ಶಿಕ್ಷಣ ತರಬೇತಿ ಮತ್ತು ಪ್ರಚಾರದ ಧ್ಯೇಯದೊಂದಿಗೆ…….

ಕರ್ನಾಟಕ ರಾಜ್ಯದ ಸಹಕಾರ ಚಳುವಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪರಿಮಿತವಾಗಿದ್ದು ಜಿಲ್ಲೆಯಲ್ಲಿ ಸಹಕಾರ ಶಿಕ್ಷಣ ನೀಡುವಿಕೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ನಿನ ಕಾರ್ಯ ತತ್ಪರತೆಯು ಅನನ್ಯವಾಗಿದೆ.ಕನಾ೯ಟಕ ರಾಜ್ಯ ಸಹಕಾರ ಮಹಾಮಂಡಳದ ಅಂಗಸಂಸ್ಥೆಯಾದ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಪ್ರಚಾರ, ಸಹಕಾರ ಸಂಸ್ಥೆಗಳ ಪದಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಹಕಾರಿ ಆಡಳಿತ ಹಾಗೂ ಸಹಕಾರಕ್ಕೆ ಸಂಬಂಧಪಟ್ಟ ವಿವಿಧ ವಿಷಯಗಳ ಕುರಿತು ಕಾಲ ಕಾಲಕ್ಕೆ ತರಬೇತಿ ವ್ಯವಸ್ಥೆ ಮಾಡಿ ಸಹಕಾರಿಗಳ ಕಾರ್ಯ ದಕ್ಷತೆ ಉನ್ನತೀಕರಿಸುವ ಕಾರ್ಯವನ್ನು ಸಮಥ೯ವಾಗಿ ದಶಕಗಳಿಂದಲೂ ಮಾಡುತ್ತಲಿದೆ.ಈ ಮೂಲಕ ಜಿಲ್ಲೆಯಲ್ಲಿ ಸಹಕಾರ ಚಳುವಳಿಯ ಪ್ರಗತಿಯನ್ನು ಸಾಧಿಸುವಲ್ಲಿ ಯೂನಿಯನ್ ಸದಾ ಕ್ರೀಯಾಶೀಲವಾಗಿರುತ್ತದೆ.

ಇತಿಹಾಸ

ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಇದು ದಿನಾಂಕ: 05-04-1937 ರಲ್ಲಿ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಸುಪರ್‌ವೈಸಿಂಗ್ ಬೋರ್ಡ ಕುಮಟಾ ಎಂಬ ನಾಮಕರಣದೊಂದಿಗೆ ಅಂದಿನ ಮುಂಬೈ ಪ್ರಾಂತ್ಯ ರಾಜ್ಯದ ಸಹಕಾರಿ ಕಾಯಿದೆ ಅನ್ವಯ ನೋಂದಣಿ ಆಗಿದ್ದು ಈ ಸಂಸ್ಥೆ ಆ ಕಾಲದಲ್ಲಿ ಸ್ಥಳಿಕ ಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತಾ ಬಂದಿದೆ.ಸದ್ರಿ ಸಂಸ್ಥೆಯ ಕಛೇರಿಯು ದಿವಂಗತ ಗೋವಿಂದ ಪೈ ಬಸ್ತಿಪೇಟೆ ಇವರ ಮನೆಯ ಮಹಡಿಯ ಮೇಲೆ ಮೊಟ್ಟಮೊದಲು ಪ್ರಾರಂಭಗೊಂಡಿತು. ಈಗ ನಾಲ್ಕು ದಶಕಗಳಿಂದ ಯೂನಿಯನ್ ಕಛೇರಿಯು ಕುಮಟಾ ಕೆ.ಡಿ.ಸಿ.ಸಿ.ಬ್ಯಾಂಕಿನ ಮಹಡಿಯ ಮೇಲೆ ಕಾರ್ಯ ಚಟುವಟಿಕೆ ನಡೆಸುತ್ತಿದೆ.

ಈ ಸಂಸ್ಥೆಯ ಮೂಲ ಸಂಸ್ಥಾಪಕರು ದಿವಂಗತ ಆರ್‌.ವಿ.ಪಂಡಿತರು. 1965 ನೇ ಸಾಲಿನಲ್ಲಿ ದಿವಂಗತ ಎಸ್.ಆರ್. ಹೆಗಡೆ, ಕಡವೆ, ಇವರು ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಇರುವಾಗ ಸದರ ಸಂಸ್ಥೆಯ ಆಡಳಿತ ಮಂಡಳಿಯು ದಿವಂಗತರಾದ ಎಂ.ಎಸ್.ಭಟ್ಟ ಗುಂಜಗೋಡ, ಎಂ.ಎಸ್.ಹೆಗಡೆ ಮಾದಪ್ಪನ್, ಪಿ.ವಿ.ಬಲೈ, ಆರ್.ವಿ.ಪಂಡಿತ್,ಜಿ.ಎಸ್.ಹೆಗಡೆ ಅಜ್ಜಿಬಾಳ, ಆರ್.ಎನ್.ಕಾಮತ್, ಪಿ.ಡಿ.ಕಾಮತ್, ಆರ್.ಎಸ್.ಭಾಗ್ವತ್ ಇವರನ್ನು ಹೊಂದಿತ್ತು.

ದಿವಂಗತ ಡಿ.ಎಸ್‌ಭಾಗ್ವತ್‌ರವರ ಅವಧಿಯಲ್ಲಿ ಅಂದರೆ 2005 ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ರಾಜ್ಯ ಸರಕಾರದಿಂದ ಉತ್ತಮ ಜಿಲ್ಲಾ ಸಹಕಾರ ಯೂನಿಯನ್ ಅಂತಾ ಪ್ರಶಸ್ತಿ ಪಡೆದು ಬೆಳಗಾವಿಯಲ್ಲಿ ದಿನಾಂಕ: 14-11-2004 ರಂದು ಜರುಗಿದ ಸಹಕಾರ ಸಪ್ತಾಹ ಸಮಾರಂಭದಲ್ಲಿ ಶ್ರೀ ಸಿದ್ದರಾಮಯ್ಯ ಮಾನ್ಯ ಉಪಮುಖ್ಯಮಂತ್ರಿಯವರು ಪ್ರಶಸ್ತಿ ಪ್ರಧಾನ ಮಾಡಿರುತ್ತಾರೆ. ಪ್ರಸ್ತುತ ಶ್ರೀ ವಿ.ಎನ್ ಭಟ್ಟ ಅಳ್ಳಂಕಿಯವರ ಸಮರ್ಥ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಕಾರ್ಯನಿರ್ವಹಿಸುತ್ತಲಿದೆ.